ಬಳ್ಳಾರಿ, ಜೂ. 08: ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಎಂಬಿಎಸ್‍ಎಲ್ ಶಾಲೆಯ ಆವರಣದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬುಧವಾರ ದಿಢೀರನೆ ಭೇಟಿ ನೀಡಿ, ಮೂಲಭೂತ ಸೌಲಭ್ಯಗಳು ಮತ್ತು ಶಿಕ್ಷಕ ವೃಂದದ ಕುರಿತು ಪರಿಶೀಲನೆ ಮಾಡಿದ್ದಾರೆ. ವೈ.ಎಂ. ಸತೀಶ್ ಅವರು ಬುಧವಾರ ಬೆಳಗ್ಗೆ ಮದ್ದಿಕೇರಿ ಭೀಮಯ್ಯ ಪ್ರೌಢಶಾಲೆಯ ಆವರಣದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, 264 ವಿದ್ಯಾರ್ಥಿಗಳ ಹಾಜರಾತಿ, ಸಮವಸ್ತ್ರ ಪೂರೈಕೆ, ಬಿಸಿಊಟ ಮತ್ತು ಹಾಲು ಪೂರೈಕೆ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರ ಹಾಜರಾತಿ, ಮಕ್ಕಳ ಆರೋಗ್ಯ ಇನ್ನಿತರೆಗಳ ಮಾಹಿತಿಗಳನ್ನು ಶಿಕ್ಷಕವೃಂದದವರಿಂದ ಪಡೆದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸಿದ್ಧಲಿಂಗಮೂರ್ತಿ ಮತ್ತು ಮುಖ್ಯ ಶಿಕ್ಷಕ ಜಾರ್ಜ್ ಸ್ಟೀಫನ್ ಅವರು ಶಾಸಕ ವೈ.ಎಂ. ಸತೀಶ್ ಅವರನ್ನು ಶಾಲೆಯ ಎಲ್ಲಾ ತರಗತಿ ಕೋಣೆಗಳಿಗೆ ಕರೆದುಕೊಂಡು ಹೋಗಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಜರಾತಿಯನ್ನು ತೋರಿಸಿದರು. ಅಲ್ಲದೇ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ, ಬಿಸಿಊಟ ಮತ್ತು ಹಾಲು ಪೂರೈಕೆಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಕೇಳಿ ಪಡೆದರು. ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, ನನ್ನ ಅನುದಾನದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಣೆಯ ಪ್ರಸ್ತಾವನೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.