ಬಳ್ಳಾರಿ ಜೂನ್ 01: ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ನಗರದ 3ನೇ ವಾಡ್ರ್ನ ಎಪಿಎಂಸಿ ವೃತ್ತದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಂಜೀವಿನಿ ಚಾರಿಟಬಲ್ ಟ್ರಸ್ಟ್, ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಯಿತು.
ವಾಡ್ರ್ನ ಪಾಲಿಕೆ ಸದಸ್ಯ, ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎಂ.ಪ್ರಭಂಜನ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರವನ್ನು ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು ಉದ್ಘಾಟಿಸಿದರು.
ಬಳಿಕ ನೇತೃತ್ವ ವಹಿಸಿದ್ದ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ತಂಬಾಕು ಸೇವನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಮುಂದಿದ್ದಾರೆ. ಕ್ಷಣಕಾಲ ಅಗೆದು ಉಗಿಯುವ ತಂಬಾಕಿನಿಂದ ಬಾಯಿ, ಕರಳು ಬೇನೆ ಸೇರಿ ಹಲವು ಕಾಯಿಲೆಗಳು ಆವರಿಸಲಿದ್ದು, ಹಲವರು, ಜೀವನ, ಜೀವವನ್ನೇ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಅಲ್ಲದೇ, ತಂಬಾಕು ಸೇವಿಸಿ ಎಲ್ಲೆಂದರಲ್ಲಿ ಉಗಿಯುವುದರಿಂದ ಪರಿಸರ ಮಾಲಿನ್ಯವೂ ಉಂಟಾಗಲಿದ್ದು, ಇತರರಿಗೂ ಕಾಯಿಲೆಗಳು ಆವರಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಯುವಕರು ತಂಬಾಕು ಸೇವನೆಯಿಂದ ವಿಮುಕ್ತರಾಗುವುದರ ಜತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಪರಿಸರದ ಸ್ವಚ್ಛತೆಯನ್ನು ಸಹ ಕಾಪಾಡಬೇಕು ಎಂದವರು ಕೋರಿದರು. ಮೂರನೇ ವಾರ್ಡ್ ವ್ಯಾಪ್ತಿಯಲ್ಲಿ ಬಹುತೇಕರು ಬಡ, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ತೆರಳಿದಲ್ಲಿ ದುಬಾರಿ ವೆಚ್ಚವಾಗಲಿದೆ. ಹಾಗಾಗಿ ಬಡಜನರ ಅನುಕೂಲಕ್ಕಾಗಿ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಶಿಬಿರಕ್ಕೆ ಬಂದು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳುವ ಮೂಲಕ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಬೆಳಗ್ಗೆ 10.30ಕ್ಕೆ ಆರಂಭವಾದ ಶಿಬಿರದಲ್ಲಿ ಸಂಜೆವರೆಗೆ ಸುಮಾರು 350ಕ್ಕೂ ಹೆಚ್ಚು ಜನರು ರಕ್ತ ಪರೀಕ್ಷೆ, ಮಧುಮೇಹ, ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡಿದ್ದು, ತಂಬಾಕು ಸೇವನೆಯಿಂದ ಬಾಯಿಹುಣ್ಣುಗಳಂತ ಸಣ್ಣಪುಟ್ಟ ಕಾಯಿಲೆಯುಳ್ಳವರಿಗೆ ಸ್ಥಳದಲ್ಲೇ ಔಷಧವನ್ನು ವಿತರಿಸಲಾಯಿತು. ಮೂವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಜಿಲ್ಲಾಸ್ಪತ್ರೆಯಿಂದ ಬಂದಿದ್ದ ಇಬ್ಬರು ವೈದ್ಯರು ತಪಾಸಣೆ ನಡೆಸಿದ್ದಾರೆ.
ಈ ವೇಳೆ ಉಪಮೇಯರ್ ಮಾಲನ್‍ಬೀ, ಪಾಲಿಕೆ ಸದಸ್ಯರಾದ ನಾಜು, ರಾಜಶೇಖರ್, ಗಾದೆಪ್ಪ, ಮುಖಂಡರಾದ ಅಯಾಜ್, ಮಾಜಿ ಸದಸ್ಯೆ ಪರ್ವಿನ್ ಬಾನು, ಸ್ಥಳೀಯ ಮುಖಂಡರಾದ ಕುಮಾರ್, ಸಿದ್ದ, ಶಿವು ಇತರರಿದ್ದರು. ಬಳ್ಳಾರಿಯ 3ನೇ ವಾಡ್ರ್ನ ಎಪಿಎಂಸಿ ವೃತ್ತದಲ್ಲಿ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಮೇಯರ್ ರಾಜೇಶ್ವರಿ ಸುಬ್ಬರಾಯುಡು ಉದ್ಘಾಟಿಸಿದರು.
.jpg)
0 Comments