ಬೆಂಗಳೂರು, ಮೋಹನ್ ದಾಸ್ ಕರಮಚಂದ್ ಗಾಂಧಿಯಿಂದ ಹಿಡಿದು ಮಹಾತ್ಮಾ ಗಾಂಧೀ ಆಗುವ ವರೆಗಿನ ಅವರ ಬದುಕಿನ ಪಯಣ ಈ ಭೂಮಂಡಲದಲ್ಲೇ ಅತ್ಯಂತ ಅದ್ಭುತ ಮತ್ತು ವೈಶಿಷ್ಟ್ಯಪೂರ್ಣವಾದುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಅವರು ಇಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಮಹಾತ್ಮ ಗಾಂಧೀಜಿ ಜನ್ಮದಿನಾಚರಣೆ” ಕಾರ್ಯಕ್ರಮದ ಉದ್ಘಾಟಿಸಿ, “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ” ಪ್ರದಾನ ಮಾಡಿ ಮಾತನಾಡಿದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಒಬ್ಬರು ಮುಂದೆ ಬದಲಾವಣೆಗೆ ಅರ್ಪಿಸಿಕೊಂಡು, ಮೌಲ್ಯಗಳನ್ನು ರೂಢಿಸಿಕೊಂಡು, ಪ್ರತಿಹಂತದಲ್ಲಿ ಎತ್ತರಕ್ಕೆ ಏರಿ ಶಕ್ತಿಯಾಗಿ ಬೆಳೆದು ಸತ್ಯದ ಮಾರ್ಗದಿಂದ ಇತರರಿಗೆ ದಾರಿ ದೀಪವಾಗಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೊಸ ದಿಕ್ಕನ್ನ ತೋರಿಸಿದರು. ಬದುಕಿನಲ್ಲಿ ಹತ್ತು ಹಲವು ಅವಮಾನಗಳನ್ನು ಸಹಿಸಿಕೊಂಡು, ಹಲವು ಬಾರಿ ತಮ್ಮ ಆತ್ಮಸಾಕ್ಷಿ ವಿರುದ್ಧ ಕೆಲಸ ಮಾಡಿ ನಂತರ ಪಶ್ಚಾತ್ತಾಪ ಪಟ್ಟು ಪರಿವರ್ತನೆ ಆಗಿ ನಿರಂತರ ಶುದ್ಧೀಕರಣದಲ್ಲಿ ಇದ್ದವರು ಮಹಾತ್ಮಾ ಗಾಂಧೀಜಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಸಾಮಾನ್ಯ ಮನುಷ್ಯನಿಂದ ಮಹಾತ್ಮ ಹೇಗೆ ಆಗಬಹುದು ಎಂಬುದಕ್ಕೆ ಉದಾಹರಣೆ ಮಹಾತ್ಮಾ ಗಾಂಧೀಜಿ ಅವರು. ಏನನ್ನೂ ಮುಚ್ಚಿಡದೇ ತಮ್ಮ ಆತ್ಮಚರಿತ್ರೆಯನ್ನು ತೆರೆದ ಪುಸ್ತಕವಾಗಿ ನಮ್ಮ ಮುಂದಿಟ್ಟಿದ್ದಾರೆ. ಬದುಕಿನಲ್ಲಿ ಎಂತಹುದೇ ಕಷ್ಟದ ಸಂದರ್ಭ ಬಂದರೂ ಒಮ್ಮೆ ಗಾಂಧೀಜಿ ಅವರ ಜೀವನ ಚರಿತ್ರೆ ಓದಿದರೆ ಅದಕ್ಕೆ ಪರಿಹಾರ ಸಿಗುತ್ತದೆ. ಜಗತ್ತಿನಲ್ಲಿ ತಮ್ಮ ಆತ್ಮಚರಿತ್ರೆಗೆ “ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರೂತ್” ಎಂದು ಹೆಸರಿಟ್ಟಿಕೊಳ್ಳುವ ಧೈರ್ಯ ಇದ್ದದ್ದು ಮಹಾತ್ಮಾ ಗಾಂಧೀಜಿ ಒಬ್ಬರಿಗೇ ಎಂದರು. 

ಮಹಾತ್ಮಾ ಗಾಂಧಿ ಅವರು ಪಲಾಯನವಾದಿಗಳಾಗಿರಲಿಲ್ಲ. ಕೆಸರಲ್ಲಿದ್ದರೂ ಕಮಲದ ಹೂವಿನಂತೆ ಶುದ್ಧವಾದ ಗುಣ ಧರ್ಮವನ್ನು ಕಾಪಾಡಿಕೊಂಡು ಬೆಳೆದವರು ಗಾಂಧೀಜಿಯವರು. ಮಹಾತ್ಮಾ ಗಾಂಧೀಜಿ ಅವರು ಆಲೋಚನೆಗಳು ಮತ್ತು ಮೌಲ್ಯಗಳ ಆತ್ಮ. ಮಹಾತ್ಮಾ ಗಾಂಧಿ ಅವರಲ್ಲಿ ಮುಗ್ಧತೆಯೂ ಇತ್ತು ಮತ್ತು ಆತ್ಮ ಸಾಕ್ಷಿಯೂ ಇತ್ತು ಎಂದರು.

*ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನ ತೋರಿಸಿದ ಗಾಂಧೀಜಿ*

ಗಾಂಧೀಜಿ ಅವರು ಸ್ವತಂತ್ರ ಹೋರಾಟದ ಮುಂಚೂಣಿಗೆ ಬಂದು ದಿಕ್ಕು ದೆಸೆ ಇಲ್ಲದೇ ನಡೆಯುತ್ತಿದ್ದ ಹೋರಾಟಕ್ಕೆ ದಿಕ್ಕನ್ನು, ಶಕ್ತಿಯನ್ನು ಹಾಗೂ ಕೆಲವು ಅಸ್ತ್ರಗಳನ್ನು ಕೊಟ್ಟು ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾರಣೀಭೂತರಾದರು. ಸತ್ಯ ಮತ್ತು ಅಹಿಂಸೆಯ ಆಧಾರದಲ್ಲಿ ಸ್ವಾತಂತ್ರ್ಯ ಪಡೆಯಬಹುದು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದ ನಮ್ಮ ಭಾರತ. ಇದು ಸಾಧ್ಯವಾದದ್ದು ಮಹಾತ್ಮಾ ಗಾಂಧೀಜಿ ಅವರ ಶಕ್ತಿಯಿಂದ. ಮಹಾತ್ಮ ಗಾಂಧಿ ಜೀವಿಸಿದ್ದ ಈ ದೇಶದಲ್ಲಿ ನಾವೆಲ್ಲರೂ ಹುಟ್ಟಿರುವುದು ನಮ್ಮ ಪುಣ್ಯ ಎಂದರು. 




*ಇಂದಿಗೂ ಮಹಾತ್ಮ ಗಾಂಧಿ ಪ್ರಸ್ತುತ*

ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಗಾಂಧಿ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಎಲ್ಲ ರಂಗದಲ್ಲೂ ಅತ್ಯಂತ ಆಳವಾಗಿ ತಮ್ಮ ವೈಚಾರಿಕತೆಯನ್ನು ಪ್ರತಿಪಾದಿಸಿದ್ದರು. ಅವರು ಹಲವಾರು ಸತ್ಯಾಗ್ರಹ ಮತ್ತು ಕಾರ್ಮಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಶಕ್ತಿ ತುಂಬಿದ್ದರು. ಸತ್ಯಾಗ್ರಹ ಎನ್ನುವ ವಿಜ್ಞಾನಕ್ಕೆ ವಿಚಾರಗಳನ್ನು ತುಂಬಿದವರು ಮಹಾತ್ಮಾ ಗಾಂಧೀಜಿ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಮತ್ತು ಮೂಲಭೂತ ವಿಚಾರಗಳಿಂದ ಇಂದಿಗೂ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದು ಹೇಳಿದರು

*ಎಲ್ಲ ಜಿಲ್ಲೆಗಳಲ್ಲಿ ಗಾಂಧೀ ಭವನ*

ಈಗಾಗಲೇ 23 ಜಿಲ್ಲೆಗಳಲ್ಲಿ ಗಾಂಧೀ ಭವನ ಇದೆ. ಉಳಿದ 7 ಜಿಲ್ಲೆಗಳಲ್ಲಿ ಇನ್ನೊಂದು ವರ್ಷದಲ್ಲಿ ಗಾಂಧೀ ಭವನ ನಿರ್ಮಾಣಕ್ಕೆ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕೆ ಬೇಕಿರುವ ಜಾಗ ಮತ್ತು ಅನುದಾನ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಖಾದಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ಗುಡಿ ಕೈಗಾರಿಕೆ ಮತ್ತು ಖಾದೀ ಗ್ರಾಮೋದ್ಯೋಗ ಸಂಘಗಳಿಗೆ ವಿಶೇಷ ಸವಲತ್ತುಗಳನ್ನು ಕೊಟ್ಟು ಅದಕ್ಕೆ ಮಾರುಕಟ್ಟೆ ಮೌಲ್ಯ ಒದಗಿಸಿ ಖಾದಿಯನ್ನು ಮುಂಚೂಣಿ ಕೈಗಾರಿಕೆ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಮೂಲಕ ಹಲವರಿಗೆ ಕೆಲಸ ಕೊಡಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಮನೋ ವಿಜ್ಞಾನಿ ಡಾ. ಸಿ ಆರ್ ಚಂದ್ರಶೇಖರ್ ಅವರಿಗೆ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-2022” ಪ್ರದಾನ ಮಾಡಿ ಗೌರವಿಸಿದರು. 

ಕಾರ್ಯಕ್ರಮದಲ್ಲಿ ಗದಗಿನ ವೀರಶೈವ ಪುಣ್ಯಾಶ್ರಮದ ಕಲ್ಲಯ್ಯ ಸ್ವಾಮೀಜಿಗಳು, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಎಂಟಿಬಿ ನಾಗರಾಜ್, ವಿರೋಧ ಪಕ್ಷದ ನಾಯಕರಾದ ಎಚ್ ಕೆ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.