ಯಶಸ್ವಿ 57 ವರ್ಷಗಳನ್ನು ಪೂರೈಸಿ ಇದೀಗ 58ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಸಂಗೀತ ಮತ್ತು ಸಾಹಿತ್ಯಕ್ಕೆ ಮೀಸಲಾದ ಸಂಸ್ಥೆ, ಮಲ್ಲೇಶ್ವರದ ಶ್ರೀ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ (ರಿ.). 

ಮಲ್ಲೇಶ್ವರಂ ಮಾತ್ರವಲ್ಲದೆ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವೇದಿಕೆ ಕಲ್ಪಿಸಿ, ಬಾಲಪ್ರತಿಭೆ ಮತ್ತು ಯುವ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುತ್ತಾ, ಕಲಾವಿದರುಗಳನ್ನು ಪ್ರೋತ್ಸಾಹಿಸುತ್ತಿರುವುದು ಈ ಸಂಸ್ಥೆಯ ಹಿರಿಮೆ. 

ಅಕ್ಟೋಬರ್ 8, ಶನಿವಾರ ಸಂಜೆ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಈ ಸಂಸ್ಥೆಯ ಉದಯಕ್ಕೆ ಕಾರಣೀಭೂತರಾದ ಕೀರ್ತಿಶೇಷ ವಿದ್ವಾನ್ ಹೆಚ್. ಪ್ರಭಾಕರ್ ಪಾಠಕ್ ಮತ್ತು ಜೆ. ಎಲ್. ಕೃಷ್ಣಮೂರ್ತಿಗಳ ಸ್ಮರಣಾರ್ಥ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಈ ಸಂಸ್ಥೆಯ ಏಳ್ಗೆಗೆ  ಪ್ರಾರಂಭದಿಂದಲೂ ಶ್ರಮಿಸಿದ್ದ, 

ಈಗಲೂ ಪ್ರೋತ್ಸಾಹಿಸುತ್ತಿರುವ 90 ವರ್ಷಗಳ ಹಿರಿಯ ಮಾತೆ ಶ್ರೀಮತಿ ಎನ್. ವಿ. ಕಮಲಮ್ಮನವರನ್ನು (ನಾದಜ್ಯೋತಿ ಸಂಸ್ಥೆಯ ಹಿರಿಯ ಸದಸ್ಯೆ ಹಾಗೂ ಕಲಾಪೋಷಕರು)  ಸನ್ಮಾನಿಸಿದ್ದು ಈ ಸಂಸ್ಥೆಗೇ ಒಂದು ಕಿರೀಟ ಇದ್ದಂತೆ.  

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ|| ಪಿ. ಭುಜಂಗರಾವ್ (ಟಿಟಿಡಿ ಹೆಚ್ ಡಿ ಪಿ ಪಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ) ಅವರು ಆಗಮಿಸಿದ್ದರು.   ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ವಿದುಷಿ ಡಾ|| ರಮ್ಯಾ ಸೂರಜ್ ಅವರಿಂದ ಶಾಸ್ತ್ರೀಯ ಸಂಗೀತ ನಂತರ ವಿದುಷಿ ಶ್ರೀಮತಿ ಕುಸುಮ ಅವರ ನೇತೃತ್ವದಲ್ಲಿ ಕಲ್ಯಾಣಿ ಕಲಾಕೇಂದ್ರ ವೃಂದದವರಿಂದ ಸಮೂಹ ಗಾಯನ ಜರುಗಿತು. 

ಈ ಎರಡೂ ಗಾಯನ ಕಾರ್ಯಕ್ರಮಗಳಲ್ಲಿ ವಿ|| ಶ್ರೀ ಶಶಿಧರ್ ಅವರು ಪಿಟೀಲು ವಾದನದಲ್ಲಿ, ವಿ|| ಶ್ರೀ ಬೆಂಗಳೂರು ರಾಮನಾಥ್ ಅವರು ಮೃದಂಗ ವಾದನದಲ್ಲಿ ಸಾಥ್ ನೀಡಿದರು. ಈ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಕುರಿತು ಹಲವಾರು ಗಣ್ಯರು ಮಾತನಾಡಿದರು. 

ಕಾರ್ಯಕ್ರಮದ ನಿರೂಪಣೆಯನ್ನು ಡಾ|| ಭಾಷ್ಯಂ ಚಕ್ರವರ್ತಿ ಹಾಗೂ ಶ್ರೀ ಕಟ್ಟೆ ಸತ್ಯನಾರಾಯಣ ಅವರು ನಿರ್ವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.